ಅಧ್ಯಾಯ 2 · ಶ್ಲೋಕ 15

ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ |

ಸಮದುಃಖಸುಖಂ ಧೀರಂ ಸೋ„ಮೃತತ್ವಾಯ ಕಲ್ಪತೇ ||

ಅರ್ಥ

ಪುರುಷಶ್ರೇಷ್ಠನೇ! ಸುಖ-ದುಃಖಗಳಿಂದ ವಿಚಲಿತನಾಗದೆ ಎರಡರಲ್ಲೂ ಸಮದೃಷ್ಟಿಯಿಂದ ಧೃಢನಾಗಿರುವವನು ಮೋಕ್ಷಕ್ಕೆ ಯೋಗ್ಯನು

ವ್ಯಾಖ್ಯಾನ

ಸಹಿಷ್ಣುತೆಯ ಫಲವನ್ನು ಕೃಷ್ಣನು ತಿಳಿಸುತ್ತಾನೆ. "ಹೇ ಪುರುಷಶ್ರೇಷ್ಠನೇ (`ಪುರುಷರ್ಷಭ`)! ಯಾವ ಧೀರ ವ್ಯಕ್ತಿಯನ್ನು (`ಯಂ ಪುರುಷಂ ಧೀರಂ`) ಇವು (ಸುಖ-ದುಃಖಗಳು) (`ಏತೇ`) ಬಾಧಿಸುವುದಿಲ್ಲವೋ (`ನ ವ್ಯಥಯಂತಿ ಹಿ`), ಯಾರು ಸುಖ ಮತ್ತು ದುಃಖಗಳಲ್ಲಿ ಸಮನಾಗಿರುತ್ತಾನೋ (`ಸಮದುಃಖಸುಖಂ`), ಅವನು (`ಸಃ`) ಅಮರತ್ವಕ್ಕೆ (ಮೋಕ್ಷಕ್ಕೆ) (`ಅಮೃತತ್ವಾಯ`) ಅರ್ಹನಾಗುತ್ತಾನೆ (`ಕಲ್ಪತೇ`)." ದ್ವಂದ್ವಗಳನ್ನು ಸಹಿಸಿಕೊಂಡು, ಸುಖ-ದುಃಖಗಳಲ್ಲಿ ಸಮಚಿತ್ತತೆಯನ್ನು ಕಾಪಾಡಿಕೊಳ್ಳುವ ಸ್ಥಿತಪ್ರಜ್ಞ ವ್ಯಕ್ತಿಯೇ ಜನನ-ಮರಣ ಚಕ್ರದಿಂದ ಬಿಡುಗಡೆ ಹೊಂದಿ ಮೋಕ್ಷವನ್ನು ಪಡೆಯಲು ಯೋಗ್ಯನಾಗುತ್ತಾನೆ.

Banaka ಅಪ್ಲಿಕೇಶನ್‌ನ ಪಾಠ ಮತ್ತು ವ್ಯಾಖ್ಯಾನ.